ಶರೀಫರ ಜನಪ್ರಿಯ ಹಾಡು-ಕೋಡಗನ ಕೋಳಿ ನುಂಗಿತ್ತಾ-
ಶರೀಫರ ಒಂದು ಒಗಟಿನ ಪದ,ಒಡಪಿನ ಅಥವಾ ಬೆಡಗಿನ ಹಾಡು:
‘ಕೋಡಗನ್ನ ಕೋಳಿ ನುಂಗಿತ’ ಎನ್ನುವ ಪದದಲ್ಲಿ; ಕೋಡಗ ಎಂದರೆ ಮಂಗ-ಮರ್ಕಟ;ಚಂಚಲ ಮನಸ್ಸು. ಕೋಳಿ ಬೆಳಗಿನ ಸೂಚನೆ.ಕೋಳಿ ಕೂಗಿದರೆ ಸೂರ್ಯೋದಯ; ಬೆಳಗಾಗುವುದು ಎಂದರೆ ಜ್ಞಾನೋದಯ. ಅದು ಆದಾಗ ಚಂಚಲ ಮನಸ್ಸು ಅದರಲ್ಲಿ ಕರಗಿಹೋಗುವುದು- ಇದು ಕೋಳಿ ಕೋಡಗನನ್ನು ನುಂಗುವುದು. ವೇದಾಂತದಲ್ಲಿ ಮನಸ್ಸನ್ನು ಮರ್ಕಟಕ್ಕೆ ಹಾಗು ಜ್ಞಾನೋದಯವನ್ನು ಕೋಳಿಗೆ ಹೋಲಿಸುವರು; ಇಲ್ಲಿ ಆ ಪ್ರತಿಮೆ ಉಪಯೋಗಿಸಿ ಹಾಡಿದ್ದಾರೆ. ಸಂಸಾರವೆಂಬ ವೃಕ್ಷಕ್ಕೆ ವಿಷಯಗಳು ಟೊಂಗೆಗಳಿದ್ದಂತೆ. ಮನಸ್ಸೆಂಬ ಮಂಗವು ಸಂಸಾರದಲ್ಲಿ ವಿಷಯದಿಂದ ವಿಷಯಕ್ಕೆ ಹಾರುತ್ತ ಸುಖಪಡುತ್ತದೆ.
ಮುಂದಿನ ಪದ್ಯಗಳೆಲ್ಲಾ ಹೀಗೆ ಚಂಚಲತೆಯನ್ನು ಅಚಲ-ಅವ್ಯಯ ಪರಬ್ರಹ್ಮ ತತ್ವವು ಅರಿವಾದಾಗ ಚಂಚಲತೆನಿಲ್ಲುವುದೆಂದು ಅನೇಕ ರೂಪಕದೊಡನೆ ಹಾಡಿದ್ದಾರೆ. ಕೊನೆಯ ಸಾಲು ಗುರು ಗೋವಿಂದರ ಕರುಣೆ ಶರೀಫರ ಅತ್ಮವನ್ನು - ನಾನೆಂಬ ಭಾವವನ್ನು ನುಂಗಿ -ಇಲ್ಲದಂತೆ ಮಾಡಿ ಜ್ಞಾನವನ್ನು ದೊರಕಿಸಿತು- ಎಂಬುದು ತಾತ್ಪರ್ಯ.
(ಪಾಠಬೇಧವನ್ನು ಆವರಣದಲ್ಲಿ ತೋರಿಸಿದೆ)
ಕೋಡಗನ ಕೋಳಿ ನುಂಗಿತ್ತಾ|
ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತಾ||ಪಲ್ಲ||

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತಾ||೧||
ಕೋಡಗನ ಕೋಳಿ ನುಂಗಿತ್ತಾ||

ಒಳ್ಳು ಒನಕಿಯ ನುಂಗಿ
ಕಲ್ಲು ಗೂಟವ ನುಂಗಿ (ಬೀಸುವ)
ಮೆಲ್ಲಲು ಬಂದ ಮುದುಕಿಯ ನೆಲ್ಲು ನುಂಗಿತ್ತಾ ||೨||(ಕುಟ್ಟಲಿಕೆ ಬಂದ ಮುದುಕಿಯ ನೊಣವು)
ಕೋಡಗನ ಕೋಳಿ ನುಂಗಿತ್ತಾ||

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನ ಮಣಿಯು ನುಂಗಿತ್ತಾ||೩||
ಕೋಡಗನ ಕೋಳಿ ನುಂಗಿತ್ತಾ||

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ್ತಾ||೪||
ಕೋಡಗನ ಕೋಳಿ ನುಂಗಿತ್ತಾ||

ಗುಡ್ಡ ಗಂವ್ಹರ ನುಂಗಿ (ಗವಿಯನು)
ಗಂವ್ಹರ ಇರಿವೆಯ ನುಂಗಿ
ಗುರುಗೋವಿಂದನ ಪಾದ ನನ್ನನೆ ನುಂಗಿತ್ತಾ||೫||
(ಗೋವಿಂದಗುರುವಿನ ಪಾದ ನನ್ನನೆ ನುಂಗಿತ್ತಾ||೫||)
ಕೋಡಗನ ಕೋಳಿ ನುಂಗಿತ್ತಾ||ಶಿಶುನಾಳ ಶರೀಫರ ಪದಗಳು -ಅನಾಮಿಕಕವನ ಸಂಗ್ರಹ.‎ > ‎ಸಂತ ಶಿಶುನಾಳ ಶರೀಫ.‎ > ‎ಶಿಶುನಾಳ ಶರೀಫರ ಗೀತೆಗಳು.

ನೋಡಿ
ಶರೀಫ ಸಾಹಿತ್ಯ
ವಿಕಿ : ಶಿಶುನಾಳ ಶರೀಫರು
ಪರಿವಿಡಿ

ಉಲ್ಲೇಖ
ಶಿಶುನಾಳ ಶರೀಫರ ಪದಗಳು -ಅನಾಮಿಕ
ವರ್ಗ: ದಾಸ ಸಾಹಿತ್ಯ
ವರ್ಗ:ಕನ್ನಡ ಸಾಹಿತ್ಯ